ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ ಮಾನ್ಯರು

ಲೇಖಕರು :
ಭಾಸ್ಕರ ರೈ ಕುಕ್ಕುವಳ್ಳಿ
ಗುರುವಾರ, ಜನವರಿ 7 , 2016

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಒಂಟಿ ಸಲಗನಂತೆ ಮೆರೆದ ಬೋಳಾರ ನಾರಾಯಣ ಶೆಟ್ಟರ ಜನ್ಮಶತಮಾನೋತ್ಸವ ವರ್ಷ ಇದು. ಶತಮಾನ ಸ್ಮರಣೆಯ ಸುಸಂದರ್ಭದಲ್ಲಿ ಸುಮಾರು ಎರಡು ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ಅವರ ಒಡನಾಡಿ ಕಲಾವಿದರಾಗಿದ್ದ ಹಿರಿಯ ವೇಷಧಾರಿ ಬಾಯಾರು ರಘುನಾಥ ಶೆಟ್ಟಿ ಅವರಿಗೆ ಶತಮಾನೋತ್ಸವ ಪ್ರಶಸ್ತಿ ಕೊಡಮಾಡಲಾಗಿದೆ. ಅದರಂತೆಯೇ, ಬೋಳಾರ ನಾರಾಯಣ ಶೆಟ್ಟರ ಪುತ್ರ, ಕತಾರ್‌ ವಾಸಿ ಬೋಳಾರ ಕರುಣಾಕರ ಶೆಟ್ಟರ ಪ್ರಯತ್ನದಿಂದ ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನ 2009ರಲ್ಲಿ ಸ್ಥಾಪನೆಯಾಗಿದ್ದು, ಅದು ಪ್ರತಿವರ್ಷ ಇಬ್ಬರು ಹಿರಿಯ ಕಲಾವಿದರಿಗೆ ನೀಡುವ "ಬೋಳಾರ ಪ್ರಶಸ್ತಿ'ಯನ್ನು ಈ ವರ್ಷ ಖ್ಯಾತ ಸ್ತ್ರೀವೇಷಧಾರಿಗಳಾದ ಪುಂಡರೀಕಾಕ್ಷ ಉಪಾಧ್ಯಾಯ ಮತ್ತು ಸಂಜಯ ಕುಮಾರ ಶೆಟ್ಟಿ ಅವರಿಗೆ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಸಾಧನೆಯ ಅವಲೋಕನ ಇಲ್ಲಿದೆ.

ಬಾಯಾರು ರಘುನಾಥ ಶೆಟ್ಟಿ

ಕಾಸರಗೋಡು ತಾಲೂಕಿನ ಬಾಯಾರಿನಲ್ಲಿ ಖ್ಯಾತ ಸ್ತ್ರೀ ವೇಷಧಾರಿ ದಿ| ಪೈವಳಿಕೆ ಐತಪ್ಪಶೆಟ್ಟಿ ಮತ್ತು ಕಲ್ಯಾಣಿ ದಂಪತಿಗೆ ಮಗನಾಗಿ ಜನಿಸಿದ ರಘುನಾಥ ಶೆಟ್ಟರಿಗೆ ಯಕ್ಷಗಾನದಲ್ಲಿ ತಂದೆಯೇ ಗುರು. ತನ್ನ 14ನೇ ವಯಸ್ಸಿನಲ್ಲಿ ಕರ್ನಾಟಕ ಮೇಳಕ್ಕೆ ಸೇರ್ಪಡೆಗೊಂಡು ಒಟ್ಟು 38 ವರ್ಷ ತಿರುಗಾಟ ನಡೆಸಿದ್ದಾರೆ. ಮಂಡೆಚ್ಚರು, ಬೋಳಾರ, ಅಳಿಕೆ, ಸಾಮಗರು, ಪುಳಿಂಚ, ಕೋಳ್ಯೂರ‌ು, ಮಿಜಾರು ಮೊದಲಾದ ಹಿರಿಯ ಕಲಾವಿದರ ಒಡನಾಟದಲ್ಲಿ ಕನ್ನಡ ಮತ್ತು ತುಳು ಪ್ರಸಂಗಗಳ ಸಮರ್ಥ ವೇಷಧಾರಿಯೆನಿಸಿಕೊಂಡರು. ಬಳಿಕ ಸುಂಕದಕಟ್ಟೆ ಮೇಳದಲ್ಲಿ ಹತ್ತು ವರ್ಷ ದುಡಿದು ಪ್ರಸ್ತುತ ಶ್ರೀ ಕಟೀಲು ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ ಪೂರೈಸಿದ್ದಾರೆ.

ಒಟ್ಟು 51 ವರ್ಷಗಳ ತಿರುಗಾಟದಲ್ಲಿ ಪೌರಾಣಿಕ, ಚಾರಿತ್ರಿಕ ಸಾಮಾಜಿಕ ಪ್ರಸಂಗಗಳಲ್ಲಿ ಎಲ್ಲ ರೀತಿಯ ವೇಷಗಳನ್ನು ನಿರ್ವಹಿಸಿದ ಅನುಭವ ರಘುನಾಥ ಶೆಟ್ಟರದು. ಪತ್ನಿ ಪುಷ್ಪವತಿ ಮಕ್ಕಳಾದ ಹೇಮಲತಾ ಮತ್ತು ಸುಮಲತಾರೊಂದಿಗೆ ಸಂತುಷ್ಟ ಜೀವನ ಸಾಗಿಸುತ್ತಿದ್ದಾರೆ. ಬೋಳಾರ ನಾರಾಯಣ ಶೆಟ್ಟರೊಂದಿಗೆ ಎರಡು ದಶಕಗಳ ಒಡನಾಟ ಅವರದು.

ಪುಂಡರೀಕಾಕ್ಷ ಉಪಾಧ್ಯಾಯ

ಪ್ರಸ್ತುತ ಉಡುಪಿ ಕುಂಜಿಬೆಟ್ಟಿನಲ್ಲಿ ನಲೆಸಿರುವ ಪುಂಡರೀಕಾಕ್ಷ ಉಪಾಧ್ಯಾಯ ಯಕ್ಷಗಾನದ ಹಿರಿಯ ಸ್ತ್ರೀ ಪಾತ್ರಧಾರಿಗಳಲ್ಲಿ ಒಬ್ಬರು. ತಂದೆ ಕೃಷ್ಣ ಉಪಾಧ್ಯಾಯ, ತಾಯಿ ಶಶಿಕಲಾ ಉಪಾಧ್ಯಾಯ. ರಾಷ್ಟ್ರ ಪ್ರಶಸ್ತಿ ವಿಜೇತ ತೋನ್ಸೆ ಕಾಂತಪ್ಪಮಾಸ್ತರ್‌ ಮತ್ತು ಟಿ. ಜಯಂತ ಕುಮಾರ್‌ ಅವರ ಯಕ್ಷಗಾನದ ಗುರುಗಳು. ಕೋಳ್ಯೂರು ರಾಮಚಂದ್ರ ರಾವ್‌ ಮತ್ತು ಕೆರೆಮನೆ ಶಂಭು ಹೆಗಡೆಯವರ ಪ್ರಭಾವದಿಂದ ತಾನು ಸಾಕಷ್ಟು ಕಲಿತಿದ್ದೇನೆ ಎನ್ನುವ ಅವರು ತೆಂಕು ಮತ್ತು ಬಡಗು ತಿಟ್ಟಿನ ಮೇಳಗಳಲ್ಲಿ ಸುಮಾರು 50 ವರ್ಷಗಳ ತಿರುಗಾಟ ಪೂರೈಸಿದ್ದಾರೆ. ಸಾಲಿಗ್ರಾಮ, ಇಡಗುಂಜಿ, ಕರ್ನಾಟಕ ಮೇಳಗಳಲ್ಲಿ ಸೇವೆಗೈದು ಕಳೆದ 25 ವರ್ಷಗಳಿಂದ ಕಟೀಲು ಮೇಳವೊಂದರಲ್ಲೇ ದುಡಿದ ಹೆಗ್ಗಳಿಕೆ ಅವರದು.

ಪ್ರಮುಖ ಸ್ತ್ರೀ ವೇಷಗಳಲ್ಲಿ ತಮ್ಮದೇ ಆದ ಛಾಪು ಹೊಂದಿರುವ ಪುಂಡರೀಕಾಕ್ಷರು ಕರ್ನಾಟಕ ಮೇಳದಲ್ಲಿ ತುಳು ಪ್ರಸಂಗಗಳ ವಿವಿಧ ಬಗೆಯ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದಾಮೋದರ ಮಂಡೆಚ್ಚ, ಮಲ್ಪೆ ರಾಮದಾಸ ಸಾಮಗ ಮತ್ತು ಬಲಿಪ ನಾರಾಯಣ ಭಾಗವತರ ಮಾರ್ಗದರ್ಶನವನ್ನು ಅವರು ಸ್ಮರಿಸುತ್ತಾರೆ.

ಸಂಜಯ ಕುಮಾರ ಶೆಟ್ಟಿ ಗೋಣಿಬೀಡು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಗೋಣಿಬೀಡಿನಲ್ಲಿ ಐತಪ್ಪಶೆ‌ಟ್ಟಿ ಮತ್ತು ಸಂದರಿ ದಂಪತಿಯ ಸುಪುತ್ರರಾಗಿ ಜನಿಸಿದ ಸಂಜಯಕುಮಾರ್‌ 17ನೇ ವಯಸ್ಸಿ ನಲ್ಲಿ ಯಕ್ಷಗಾನ ರಂಗ‌ವನ್ನು ಪ್ರವೇಶಿಸಿದರು. ಪಡ್ರೆ ಚಂದು ಅವರಲ್ಲಿ ನಾಟ್ಯ ಅಭ್ಯಸಿಸಿ ಸ್ತ್ರೀ - ಪುರುಷ ಪಾತ್ರಗಳೆರಡರಲ್ಲೂ ಸೈ ಅನಿಸಿಕೊಂಡರು. ಸ್ತ್ರೀವೇಷದಲ್ಲಿ ಡಾ| ಕೋಳ್ಯೂರು ರಾಮ ಚಂದ್ರ ರಾವ್‌ ಮತ್ತು ಎಂ.ಕೆ ರಮೇಶಾಚಾರ್ಯರ ಮಾರ್ಗ ದರ್ಶನವನ್ನು ಅವರು ಸ್ಮರಿಸುತ್ತಾರೆ.

ಸುಬ್ರಹ್ಮಣ್ಯ, ಪುತ್ತೂರು, ಸುರತ್ಕಲ್‌, ಕರ್ನಾಟಕ, ಮಂಗಳಾದೇವಿ, ಎಡನೀರು, ಕುಂಟಾರು, ಹೊಸನಗರ ಮತ್ತು ಪ್ರಸ್ತುತ ಕೊಲ್ಲಂಗಾನ ಮೇಳದಲ್ಲಿ ಕಲಾವಿದರಾಗಿ ಹಾಗೂ ಗಣೇಶಪುರ ಮತ್ತು ಬಪ್ಪನಾಡು ಮೇಳಗಳಲ್ಲಿ ಸಂಚಾಲಕರಾಗಿ ಸುಮಾರು 40 ವರ್ಷಗಳಿಂದ ತಿರುಗಾಟ ನಡೆಸುತ್ತಿರುವ‌ ಸಂಜಯ ಕುಮಾರ್‌ ತಮ್ಮ ಯಕ್ಷಪ್ರತಿಭೆ ಕಲಾತಂಡದ ಮೂಲಕ ವಿವಿಧೆಡೆ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

*********************


ಲೇಖನ ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ